ಮೋಹನದಾಸ
	ಸು. 1750. ಹರಿದಾಸರ ಪೈಕಿ ಒಬ್ಬರು. ಬಡತನದ ಬೇಗೆಯಿಂದ ಇವರ ತಾಯಿ ರೋಗದ ಕೂಸನ್ನು ತುಂಗಭದ್ರೆಗೆ ಎಸೆಯಬೇಕೆಂದಿದ್ದಾಗ ವಿಜಯದಾಸರ ಅನುಗ್ರಹದಿಂದ ಬದುಕಿದರು. ಅವರಿಂದ ಮೋಹನ ಎಂದು ಹೆಸರು ಹೊಂದಿ ಮೋಹನದಾಸರಾದರು. ಮೋಹನ ವಿಠಲ ಎಂಬ ಅಂಕಿತದಿಂದ ಸುಳಾದಿ, ಕೀರ್ತನೆ ಮತ್ತು ಉಗಾಭೋಗಗಳನನು ರಚಿಸಿದ್ದಾರೆ. ಇವರಿಗೆ ವಿಜಯದಾಸರಲ್ಲಿ ಬಹಳ ಗೌರವ ಇತ್ತು. ಅವರನ್ನು ಕುರಿತಂತೆಯೂ ಇವರು ಕೀರ್ತನೆಗಳನ್ನು ಬರೆದಿದ್ದಾರೆ. ಇವರ ರಚನೆಗಳಲ್ಲಿ ಹರಿಭಕ್ತಿಯನ್ನು ಪ್ರಧಾನವಾಗಿ ಬೋಧಿಸಿರುವುದು ಕಂಡು ಬರುತ್ತದೆ. 

	217 ನುಡಿಗಳ ಕೋಲುಹಾಡು ಇವರ ಒಂದು ಪ್ರಮುಖ ರಚನೆ. ಇದು ಜನಪದ ಸಾಹಿತ್ಯದ ಕೋಲುಪದಗಳ ಮಟ್ಟಿನಲ್ಲಿದೆ. ನಾಲ್ಕು ಪಾದಗಳಿಗೆ ಒಂದು ನುಡಿ. ಈ ರಚನೆಯ ಸುಮಾರು ಅರ್ಧಭಾಗ ವಿಷ್ಣುವಿನ ಸ್ತುತಿಗೆ ಮೀಸಲಾಗಿದೆ. ಇದರಲ್ಲಿ ಸುಭದ್ರೆ-ರುಕ್ಮಿಣಿ ಮತ್ತು ಕೃಷ್ಣಾರ್ಜುನರ ಸಂಭಾಷಣೆ ಇದೆ. 

		ಮೋಹನದಾಸರು ತಮ್ಮ ಕೀರ್ತನೆಗಳಲ್ಲಿ ಏನೆಲೊ, ಮೂರ್ ದುಡ್ಡು ಭಾವಯ್ಯ, ತಲೆಹೊಡಕ, ತಿರುಗಲ ತಿಪ್ಪಿ, ಮನೆಮಾರಿ ಮುಂತಾದ ಆಡುಮಾತುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ